ಕ್ಲೆಮಾಟಿಸ್ -
ರ್ಯಾನನ್‍ಕ್ಯುಲೇಸೀ ಕುಟುಂಬಕ್ಕೆ ಸೇರಿದ ಸುಂದರವಾದ ಹಂಬು. ಸಾಮಾನ್ಯಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ವರ್ಜಿನ್ಸ್ ಬವರ್ ಎಂದೂ ಕನ್ನಡದಲ್ಲಿ ಹೊಟ್ಟು ಹಂಬು, ತಲೆಜಡಾರಿ ಎಂದೂ ಹೆಸರಿದೆ. ಇದರಲ್ಲಿ ಸುಮಾರು 250 ಪ್ರಭೇದಗಳಿವೆ. ಪ್ರಪಂಚದಾದ್ಯಂತ ಇವುಗಳ ವ್ಯಾಪ್ತಿ ಇರುವುದಾದರೂ ಸಮಶೀತೋಷ್ಣವಲಯಗಳಲ್ಲಿ ಹೆಚ್ಚು  ಸಂಖ್ಯೆಯಲ್ಲಿವೆ. ಭಾರತದಲ್ಲಿ ಸುಮಾರು 25 ಪ್ರಭೇದಗಳು ಕಾಣದೊರೆಯುತ್ತವೆ. ಇವುಗಳಲ್ಲಿ ಕ್ಲಿಮಾಟಿಸ್ ಗೌರಿಯಾನ ಎಂಬ ಪ್ರಭೇದ ಬಹುಮುಖ್ಯವಾದುದು ಮತ್ತು ಸ್ವಭಾವಿಕವಾಗಿ ಬೆಳೆಯುವಂಥದು. ಕೆಲವು ಪ್ರಭೇದಗಳ ಹೂಗಳು ಬಲು ಅಂದವಾಗಿರುವುದರಿಂದ ಉದ್ಯಾನಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿವೆ. ಇವನ್ನು ಗೋಡೆಗಳ ಇಲ್ಲವೆ ಚಪ್ಪರಗಳ ಮೇಲೆ ಅಲಂಕಾರಕ್ಕಾಗಿ ಹಬ್ಬಿಸಿ ಬೆಳೆಸುವುದುಂಟು. ಎಲ್ಲ ಪ್ರಭೇದಗಳೂ ಬಹುವಾರ್ಷಿಕ ಬಳ್ಳಿಗಳು; ತಮ್ಮ ಎಲೆಗಳ ತೊಟ್ಟಿನ ಸಹಾಯದಿಂದ ಆಸರೆಗಳನ್ನು ತಬ್ಬಿ ಬೆಳೆಯುತ್ತವೆ. ಎಲೆಗಳು ಸಂಯುಕ್ತ ಮಾದರಿಯವು. ಅಭಿಮುಖ ಜೋಡಣೆಯನ್ನು ಪ್ರದರ್ಶಿಸುತ್ತವೆ. ಹೂಗಳು ಮಧ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿ ಹೂವಿನಲ್ಲಿ 4 ಇಲ್ಲವೆ 5 ಪುಷ್ಪಪತ್ರಗಳೂ ಅನೇಕ ಕೇಸರಗಳೂ ಅನೇಕ ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯವೂ ಇವೆ. ದಳಗಳು ಇಲ್ಲದಿರುವುದು ಮತ್ತು ಕಾರ್ಪೆಲುಗಳು ಬಿಡಿಬಿಡಿಯಾಗಿರುವುದು ಈ ಗಿಡದ ಕೆಲವು ವಿಶೇಷ ಲಕ್ಷಣಗಳು. ಫಲ ಒಂದೇ ಬೀಜವುಳ್ಳದ್ದು. ಅದಕ್ಕೆ ಎಕೀನ್ ಎಂಬ ಹೆಸರಿದೆ. ಶಲಾಕೆಯ ಮೇಲೆ ಅದರ ಉದ್ದಕ್ಕೂ ಸೂಕ್ಷ್ಮವಾದ ಅನೇಕ ಕೂದಲುಗಳಿವೆ. ಪ್ರತಿಯೊಂದು ಹೂವಿನ ಕಾರ್ಪೆಲುಗಳ ಶಲಾಕೆಗಳೆಲ್ಲಕ್ಕೂ ಈ ಬಗೆಯ ಕೂದಲಿರುವುದರಿಂದ ಎಲ್ಲವೂ ಒಟ್ಟುಗೂಡಿ ಕೂದಲಿನ ಜೊಂಪೆಯಂತೆ ಕಾಣುತ್ತದೆ. ಇದರಿಂದಾಗಿ ಗಿಡಕ್ಕೆ ಮುದುಕನ ಗಡ್ಡ ಎಂಬ ಹೆಸರೂ ಬಂದಿದೆ.
ಕ್ಲೆಮಾಟಿಸ್‍ನ ಹಲವು ಪ್ರಭೇದಗಳಿಗೆ ಔಷಧೀಯ ಪ್ರಾಮುಖ್ಯವೂ ಇದೆ. ಕ್ಲೆ.ಗೌರಿಯಾನದ ಎಲೆ ಮತ್ತು ಕಾಂಡಗಳಿಗೆ ಗುಳ್ಳೆಗಳೆಬ್ಬಿಸುವ ಗುಣ ಇದೆ. ಕ್ಲೆ.ಸ್ಮೈ ಲಾಸಿಫೋಲಿಯ ಪ್ರಭೇದದ ಬೇರಿನಿಂದ ಪಡೆಯಲಾಗುವ ಕಷಾಯ ಕುರು, ಇಸಬು, ರಕ್ತದೋಷಗಳು, ಜ್ವರ ಮುಂತಾದವುಗಳಿಗೆ ಪರಿಹಾರಕವೆಂದು ಹೇಳಲಾಗಿದೆ.  ಟ್ರೈಲೋಬ ಪ್ರಭೇದವನ್ನು ಕುಷ್ಠರೋಗ, ಜ್ವರ ಇತ್ಯಾದಿಗಳ ನಿವಾರಣೆಗೆ ಬಳಸಲಾಗುತ್ತಿದೆ. ಕ್ಲೆಮಾಟಿಸಿನ ಇನ್ನು ಕೆಲವು ಪ್ರಭೇದಗಳು ವಿಷಪೂರಿತ, ಉದಾಹರಣೆಗೆ ಕ್ಲೆ. ನೇಪಾಲೆನ್ಸಿಸ್ ಮತ್ತು ಕ್ಲೆ.ಓರಿಯಂಟ್ಯಾಲಿಸ್ ಇವುಗಳಲ್ಲಿರುವ ಅನಿಮೋನಿನ್ ಎಂಬ ವಿಷವಸ್ತು ಇವುಗಳ ನಂಜುಗುಣಕ್ಕೆ ಕಾರಣವೆಂದು ನಂಬಲಾಗಿದೆ.

ಉದ್ಯಾನಪ್ರಾಮುಖ್ಯವಿರುವ ಪ್ರಭೇದಗಳಲ್ಲಿ ಮುಖ್ಯವಾದವು ಅರಿಸ್ಟೇಟ, ಜಾಕ್‍ಮ್ಯಾನಿಯೈ, ಫ್ಲಾಮ್ಯುಲ, ಲಾಸೋನಿಯಾನ, ಫ್ಲಾರಿಡ, ಸ್ಟ್ಯಾನ್ಲಿಯೈ, ವಿಯೋರ್ನ, ಫ್ರೆಮಾಂಟಿಯೈ ಮುಂತಾದುವು. ಇವನ್ನು ಬೀಜ, ಲೇಯರಿಂಗ್ ಇಲ್ಲವೆ ಇನಾರ್ಚಿಂಗ್ ವಿಧಗಳಿಂದ ವೃದ್ಧಿಸಬಹುದು. ಇವುಗಳ ಬೆಳೆವಣಿಗೆಗೆ ಆಳವಾದ, ಗೋಡು ಶ್ರೇಷ್ಠವಾದುದು. ಮಣ್ಣು ಕ್ಷಾರೀಯವಾಗಿದ್ದರೆ ಉತ್ತಮ, ನೆಲದಲ್ಲಿ ನೀರು ಸರಾಗವಾಗಿ ಇಳಿಯುವಂತಿರಬೇಕು. ಕುದುರೆಗೊಬ್ಬರ ಇಲ್ಲವೆ ದನದ ಗೊಬ್ಬರ ಅತ್ಯವಶ್ಯ. 
									(ಡಿ.ಎಂ.; ಎಂ.ಎಸ್.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ